ಮಹಿಳಾ ಉದ್ದೇಶಿತ ಆಯವ್ಯಯ
1. ಜೆಂಡರ್ ಬಜೆಟ್ ಕೋಶ – ಅಗತ್ಯ ಮತ್ತು ಸ್ಥಾಪನೆ
ಕರ್ನಾಟಕ ರಾಜ್ಯವು ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳನ್ನು ಇರಿಸಿದೆ. ಮಹಿಳಾ ಸಂಬಂಧಿತ ಯೋಜನೆಗಳ ಮೇಲುಸ್ತುವಾರಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆಯನ್ನು (ಕೆಎಂಎವೈ) ಅನುಷ್ಠಾನಗೊಳಿಸಿರುವುದು ಇಂತಹ ಪ್ರಯತ್ನಗಳಲ್ಲಿ ಒಂದಾಗಿದೆ. ಕೆಎಂಎವೈ ಅಡಿಯಲ್ಲಿನ ಯೋಜನೆಗಳನ್ನು, ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು ನಿಯತವಾಗಿ ಪರಿಶೀಲನೆ ಮಾಡುತ್ತಾರೆ. ಈ ಯೋಜನೆಯ ಪ್ರಮುಖ ಉದ್ದೇಶ ಲಿಂಗ ಸಮಾನತೆಯನ್ನು ಸಾಧಿಸುವುದರೊಂದಿಗೆ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದಾಗಿದೆ.
ಆ ತರುವಾಯ, ರಾಜ್ಯವು 2006-07ನೇ ಸಾಲಿನಿಂದ ಲಿಂಗ ಆಧಾರಿತ (ಜೆಂಡರ್ ಬೇಸಡ್) ಆಯವ್ಯಯವನ್ನು ಸಿದ್ಧಪಡಿಸಲು ಆರಂಭಿಸಿದೆ. ವಿಧಾನ ಮಂಡಲದಲ್ಲಿ ಮಂಡಿಸಲಾಗುವ ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯು ಮಹಿಳಾ ಕೇಂದ್ರಿತ ಯೋಜನೆಗಳಲ್ಲಿ ಸಾರ್ವಜನಿಕ ವೆಚ್ಚಗಳನ್ನು ಬಿಂಬಿಸುತ್ತದೆ. ಈ ಕುರಿತು, 2006-07ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 25ರಲ್ಲಿ ಘೋಷಿಸಲಾಗಿದೆ.
ಆರ್ಥಿಕ ಇಲಾಖೆಯು 2007ರಲ್ಲಿ, ವಿತ್ತೀಯ ನೀತಿ ವಿಶ್ಲೇಷಣಾ ಕೋಶದಲ್ಲಿ ಜೆಂಡರ್ ಬಜೆಟ್ ಕೋಶ ವನ್ನು ಸ್ಥಾಪಿಸಿ ಒಬ್ಬ ಸಂಯೋಜಕರನ್ನು ನಿಯುಕ್ತಿಗೊಳಿಸಿದೆ. ಜೆಂಡರ್ ಬಜೆಟ್ ಕೋಶದ ಪ್ರಮುಖ ಕಾರ್ಯವು ಮಹಿಳೆಯರಿಗೆ ಸಂಬಂಧಿಸಿದಂತೆ ಸಂಪನ್ಮೂಲಗಳ ಗಾತ್ರ, ಹಂಚಿಕೆ ಮತ್ತು ವೆಚ್ಚವನ್ನು ಗುರುತಿಸಿ ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯನ್ನು ಪ್ರಚುರ ಪಡಿಸುವುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೀತಿಗಳ ಸೂಕ್ತ ಅಳವಡಿಕೆಗಾಗಿ ವಿವಿಧ ಇಲಾಖೆಗಳಿಗೆ ಮಾರ್ಗದರ್ಶನ ಹಾಗೂ ಸಾಮಥ್ರ್ಯವರ್ಧನೆಗಾಗಿ ನೆರವನ್ನು ಸಹ ನೀಡುತ್ತಿದೆ. 2007-08ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಪ್ರಥಮ ದಾಖಲೆಯನ್ನು ವಿಧಾನ ಮಂಡಲದಲ್ಲಿ ಮಂಡಿಸಲಾಯಿತು. ಕರ್ನಾಟಕವು ದೇಶದಲ್ಲಿಯೇ ಈ ಕಾರ್ಯವನ್ನು ಸಾಧಿಸಿದ ಮೊಟ್ಟಮೊದಲ ರಾಜ್ಯವಾಗಿದೆ.
2. ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆ – ವ್ಯಾಪ್ತಿ ಹಾಗೂ ವಿನ್ಯಾಸ
ಮಹಿಳಾ ಉದ್ದೇಶಿತ ಆಯವ್ಯಯವು ಒಂದು ನೂತನ ಪ್ರಯತ್ನವಾಗಿದ್ದು, ಆಯವ್ಯಯವನ್ನು ಸಿದ್ಧಪಡಿಸುವಲ್ಲಿ ಪ್ರಗತಿಶೀಲ ಸುಧಾರಣೆಗಳ ಅವಶ್ಯಕತೆ ಇದೆ. ಆಯವ್ಯಯದಲ್ಲಿನ ಸಂಪನ್ಮೂಲಗಳ ಹಂಚಿಕೆಯನ್ನು ಉದ್ದೇಶಿತ ಫಲಿತಾಂಶಗಳ ಸಾಧನೆಗೆ ಹೊಂದಿಸಬೇಕಿದೆ. ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯ ನಿರೂಪಿತ ಉದ್ದೇಶವು ಮಹಿಳೆಯರ ಅದ್ಯತೆಯನ್ನು ಗುರುತಿಸಿ ಅವರ ಅಗತ್ಯತೆಗಳನ್ನು ಮನಗಂಡು ಸಂಪನ್ಮೂಲಗಳ ಹಂಚಿಕೆಯ ಗಾತ್ರವನ್ನು ಗುರುತಿಸುವುದಾಗಿದೆ.
ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯು ವಿವಿಧ ಇಲಾಖೆಗಳ ಯೋಜನೆಗಳಡಿಯಲ್ಲಿನ ಅನುದಾನಗಳ ಹಂಚಿಕೆಯನ್ನು ಬಿಂಬಿಸುತ್ತದೆ. ಈ ಯೋಜನೆಗಳನ್ನು ಎರಡು ವರ್ಗಗಳಲ್ಲಿ ಅಂದರೆ, ವರ್ಗ-ಎ ಮತ್ತು ವರ್ಗ-ಬಿ ಗಳ ಅಡಿಯಲ್ಲಿ ಪ್ರಚುರ ಪಡಿಸಲಾಗುತ್ತದೆ.
- ವರ್ಗ-ಎ: ಶೇಕಡಾ ನೂರಕ್ಕೆ ನೂರರಷ್ಟು ಮಹಿಳೆಯರ ಸೌಕರ್ಯಕ್ಕಾಗಿಯೇ ಇರುವ ಯೋಜನೆಗಳು.
- ವರ್ಗ-ಬಿ: ಕನಿಷ್ಠ ಶೇಕಡಾ 30 ರಷ್ಟಾದರೂ ಸೌಕರ್ಯಗಳನ್ನು ಮಹಿಳೆಯರಿಗಾಗಿ ಒದಗಿಸುವ ಯೋಜನೆಗಳು.
ಈ ಮೇಲೆ ತಿಳಿಸಿರುವಂತೆ ಯೋಜನೆಗಳ ಗುರುತಿಸುವಿಕೆ ಮತ್ತು ವರ್ಗೀಕರಣವನ್ನು ಪ್ರತಿ ವರ್ಷ ಆಯವ್ಯಯವನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತದೆ. ಲಿಂಗ ವಿಘಟಿತ ದತ್ತಾಂಶಗಳು ಲಭ್ಯವಿಲ್ಲದ ಕಾರಣ ವರ್ಗ-ಬಿ ಯಲ್ಲಿನ ಯೋಜನೆಗಳ ವರ್ಗೀಕರಣವು ಊಹೆಗಳನ್ನು ಆಧರಿಸಿ ಮಾಡಲಾಗಿದ್ದು, ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯನ್ನು ನಿರಂತರವಾಗಿ ಸ್ಥಿರೀಕರಿಸಲಾಗುತ್ತಿದೆ.
ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯಲ್ಲಿ ನೀಡಲಾಗಿರುವ ಮಾಹಿತಿಯ ಗುಣಮಟ್ಟವನ್ನು ವೃದ್ಧಿಸಲು 2012-13ನೇ ಸಾಲಿನಿಂದ ವರ್ಗ-ಎ ನಲ್ಲಿ ವಿವರಣಾತ್ಮಕ ಟಿಪ್ಪಣಿಗಳನ್ನು ನೀಡಲಾಗುತ್ತಿದೆ. ಈ ಟಿಪ್ಪಣಿಗಳು ಯೋಜನೆಯ ಜಾರಿ, ಅದರ ಉದ್ದೇಶಗಳು ಮತ್ತು ಸಾಧನೆಗಳನ್ನು ತಿಳಿಸುತ್ತಿದ್ದು ವಿವಿಧ ಇಲಾಖೆಗಳಿಂದ ಇದೇ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಿರುವ ನಿಗದಿತ ನಮೂನೆಯಲ್ಲಿ ಪಡದಿರುವ ಮಾಹಿತಿ, ವಾರ್ಷಿಕ ವರದಿಗಳು ಹಾಗೂ ಮಾಸಿಕ ಕಾರ್ಯಕ್ರಮ ಅನುಷ್ಠಾನ ವೇಳಾಪಟ್ಟಿ (ಎಂಪಿಐಸಿ) ಯ ಮಾಹಿತಿಯ ಆಧಾರದಲ್ಲಿ ರೂಪಿಸಲಾಗಿದೆ. ಎಂಪಿಐಸಿಯನ್ನು ವಿತ್ತೀಯ ಕಾರ್ಯನೀತಿ ಸಂಸ್ಥೆಯು ವಿನ್ಯಾಸಗೊಳಿಸಿದ್ದು, ಡಿಸೆಂಬರ್ 2008 ರಿಂದ ಇದನ್ನು ಎಲ್ಲಾ ಇಲಾಖೆಗಳಿಗೆ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಈ ಟಿಪ್ಪಣಿಗಳು, ಇಲಾಖೆಗಳ ಫಲಿತಾಂಶ ಚೌಕಟ್ಟು ದಾಖಲೆಗಳಲ್ಲಿ (ಆರ್ಎಫ್ಡಿ)ನ ಉದ್ದೇಶಕ್ಕೆ ಅನ್ವಯವಾಗುವ ವಿವಿಧ ಇಲಾಖಾ ಯೋಜನೆಗಳ ಚಟುವಟಿಕೆಗಳು ಮತ್ತು ಯಶಸ್ವಿ ಸೂಚಕಗಳನ್ನು ಬಿಂಬಿಸುತ್ತದೆ. 2012-13ನೇ ಸಾಲಿನ ಆರ್ಎಫ್ಡಿ ಮಾರ್ಗಸೂಚಿಯು (ವಿಭಾಗ 1, ಪುಟ ಸಂಖ್ಯೆ 4) ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯಲ್ಲಿ ಹೆಸರಿಸಿರುವ ವರ್ಗ-ಎ ಮತ್ತು ವರ್ಗ-ಬಿ ಯಲ್ಲಿನ ಯೋಜನೆಗಳಿಗೆ ನಿರ್ಧಿಷ್ಟವಾದ ಉದ್ದೇಶಗಳನ್ನು ಸೂಚಿಸುವುದು ಮತ್ತು ಅವುಗಳಿಗೆ ಸೂಕ್ತ ಮೌಲ್ಯಾಂಕಗಳನ್ನು ನಿಗದಿಪಡಿಸುವುದನ್ನು ಕಡ್ಡಾಯಗೊಳಿಸಿದೆ.
ಕೆಎಂಎವೈ ಅಡಿಯಲ್ಲಿ ಬರುವ ನಿರ್ದಿಷ್ಟ ಇಲಾಖೆಗಳ ಯೋಜನೆಗಳ ಅನುಷ್ಠಾನ ಮತ್ತು ಪರಿಶೀಲನೆಗಾಗಿ, ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯನ್ನು ಬಳಸುತ್ತಿವೆ. ಮಹಾಲೇಖಪಾಲರು ಮತ್ತು ಸಂಶೋಧಕರು ಸಹ ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯನ್ನು ಬಳಸುತ್ತಿದ್ದಾರೆ. 2010-11ನೇ ಹಾಗೂ 2011-12ನೇ ಸಾಲಿನ ರಾಜ್ಯ ಹಣಕಾಸು ವರದಿಯಲ್ಲಿ ಮಹಾಲೇಖಪಾಲರು ಈ ದಾಖಲೆಯನ್ನು ಬಳಸಿರುತ್ತಾರೆ. ಈ ದಾಖಲೆಯನ್ನು ನಾಗರಿಕರು ಮತ್ತು ಜನ ಪ್ರತಿನಿಧಿಗಳು ಸಹ ಬಳಸಬಹುದಾಗಿರುತ್ತದೆ.
3. ಯೋಜನೆಗಳ ವರ್ಗೀಕರಣ – ಊಹೆಗಳ ನಿರೂಪಣೆಗೆ ನಿಲುವುಗಳು
ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯಲ್ಲಿನ ಯೋಜನೆಗಳ ವರ್ಗೀಕರಣವನ್ನು ಕೆಲವು ಊಹೆಗಳನ್ನು ಆಧರಿಸಿ ಮಾಡಲಾಗಿದೆ. ಈ ಊಹೆಗಳ ನಿರೂಪಣೆಯು (ಅ) ಅಶೋಕ ಲಹಿರಿ ಸಮಿತಿ ವರದಿ ಯಲ್ಲಿ ಪ್ರತಿಪಾದಿಸಿರುವಂತೆ ಮತ್ತು (ಆ) ಭಾರತ ಸರ್ಕಾರದ ಆಯವ್ಯಯದ ವೆಚ್ಚಗಳ ವಹಿ ಸಂಖ್ಯೆ 20, ಸಂಪುಟ-1ರಲ್ಲಿ ಬಳಸಿರುವ ಮಾದರಿಯನ್ನು ಅನುಸರಿಸಿ ಮಾಡಲಾಗಿದೆ.
4. ಜೆಂಡರ್ ಬಜೆಟ್ ಕೋಶದ ಸಂಯೋಜಕರ ಪಾತ್ರ
ಪ್ರಸ್ತುತ ಜಾರಿಯಲ್ಲಿರುವ ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯು, ಸಿದ್ಧತೆ, ದಾಖಲೀಕರಣ, ಮೇಲುಸ್ತುವಾರಿ ಮತ್ತು ಮೌಲ್ಯಮಾಪನಗಳನ್ನು ಒಳಗೊಂಡಿದೆ. ಆರ್ಥಿಕ ಇಲಾಖೆಯು ಸಿದ್ಧತೆ ಮತ್ತು ದಾಖಲೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಿದ್ಧತೆಯ ಭಾಗವಾಗಿ, ಸಂಬಂಧಪಟ್ಟ ಇಲಾಖೆಗಳಿಂದ ವರ್ಗ-ಎ ಮತ್ತು ವರ್ಗ-ಬಿನ ಯೋಜನೆಗಳ ಕುರಿತ ಮಾಹಿತಿಯನ್ನು ಕೋರಿ, ಒಂದು ವಿವರವಾದ ಆಯವ್ಯಯ ಸುತ್ತೋಲೆಯನ್ನು 2010ನೇ ಸಾಲಿನಲ್ಲಿ ಹೊರಡಿಸಲಾಗಿದೆ.
ಮಾಹಿತಿ ಹಂಚಿಕೆ, ಸಾಮಥ್ರ್ಯವರ್ಧನೆ ಮತ್ತು ಪ್ರಚಾರ
ಜೆಂಡರ್ ಬಜೆಟ್ ಕೋಶವು, ಭಾರತ ಸರ್ಕಾರದ ವಿತ್ತ ಮಂತ್ರಾಲಯದ, ಜಂಟಿ ಕಾರ್ಯದರ್ಶಿಗಳ ಹಂತದ ಅಧಿಕಾರಿಗಳಾದ, ನಿರ್ದೇಶಕರು ವಿತ್ತೀಯ ಕಾರ್ಯನೀತಿ ಸಂಸ್ಥೆ ಮತ್ತು ಮುಖ್ಯಸ್ಥರು ವಿತ್ತೀಯ ನೀತಿ ವಿಶ್ಲೇಷಣಾ ಕೋಶ, ಇವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೆಂಡರ್ ಬಜೆಟ್ ಸ್ಟೇಟ್ಮೆಂಟ್ನ ಪರಿಷ್ಕರಣೆಯಲ್ಲಿ ಪರಿಶ್ರಮಿಸುತ್ತಿರುವ, ನ್ಯಾಷನಲ್ ಮಿಷನ್ ಫಾರ್ ಎಂಪವರ್ಮೆಂಟ್ ಆಫ್ ವುಮೆನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ತಜ್ಞ ಸಮಿತಿಯೊಂದಿಗೆ ಜೆಂಡರ್ ಬಜೆಟ್ ಕೋಶವು ಕಾರ್ಯನಿರ್ವಹಿಸುತ್ತಿದೆ. ಐಐಎಂ ಬೆಂಗಳೂರು, ಎಎಸ್ಸಿಐ ಹೈದರಾಬಾದ್, ಐಡಿಆರ್ಸಿ ಕೆನಡಾ ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಾಲಯ ಹಾಗೂ ನ್ಯಾಷನಲ್ ಮಿಷನ್ ಫಾರ್ ಎಂಪವರ್ಮೆಂಟ್ ಆಫ್ ವುಮೆನ್ ನಡೆಸಿದ ರಾಷ್ಟ್ರೀಯ ಮತ್ತು ಪ್ರಾಂತೀಯ ವಿಚಾರ ಗೋಷ್ಠಿಗಳು ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸಿದೆ. ಅದಲ್ಲದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೋಆಪರೇಷನ್ ಆಂಡ್ ಚೈಲ್ಡ್ ಡೆವಲಪ್ಮೆಂಟ್ (ಎನ್ಐಪಿಸಿಸಿಡಿ), ಬೆಂಗಳೂರು ಇವರ ಸಹಯೋಗದೊಂದಿಗೆ ಕರ್ನಾಟಕ ಮೂಲದ ಸರ್ಕಾರೇತರ ಸಂಸ್ಥೆಗಳು, ಚಳುವಳಿಕಾರರು, ವಕೀಲರು, ಪೋಲಿಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಇತರೆ ಸರ್ಕಾರಿ ನೌಕರರು ಮತ್ತು ವಿವಿಧ ಪಾಲುದಾರರಿಗೆ ತರಬೇತುದಾರರ ತರಬೇತಿ (ToT)ಮತ್ತು ಸಾಮಥ್ರ್ಯವರ್ಧನೆಯ ಆನೇಕ ಕಾರ್ಯಾಗಾರಗಳನ್ನು ನಡೆಸಲಾಗಿದೆ.
ಯುಎನ್ ವುಮೆನ್ ಹಾಗೂ ಎನ್ಎಂಇಡ್ಲ್ಯೂ ಇವರ ಪ್ರಾಯೋಜಿತ ಎರಡು ಸಂಶೋಧನಾ ಪ್ರಾಜೆಕ್ಟ್ಗಳು (ಅ) ‘The Gender Audits: Reinforcing the Missing Link in Gender Responsive Budgeting’ ಮತ್ತು (ಬಿ) ‘Gender Mainstreaming in Municipal Budgeting’ ಸಧ್ಯದಲ್ಲಿಯೇ ಆರಂಭವಾಗಲಿವೆ. ಈ ಸಂದರ್ಭಗಳಲ್ಲಿ ಬಳಸಿರುವ ಪ್ರಸ್ತುತಿಗಳು ಇಲ್ಲಿವೆ.
5. ಮೇಲುಸ್ತುವಾರಿಗಾಗಿ ಸಾಂಸ್ಥಿಕ ವ್ಯವಸ್ಥೆಗಳು
ಮಹಿಳಾ ಉದ್ದೇಶಿತ ಆಯವ್ಯಯದ ಮೇಲುಸ್ತುವಾರಿಯು ಒಂದು ಒಟ್ಟುಗೂಡಿದ ಪ್ರಯತ್ನವಾಗಿದೆ. ಆರ್ಥಿಕ ಇಲಾಖೆಯು, ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯಲ್ಲಿ ವರ್ಗೀಕರಿಸಿರುವ ಯೋಜನೆಗಳನ್ನು ಒಳಗೊಂಡಂತೆ ಎಲ್ಲಾ ಯೋಜನೆಗಳ ವೆಚ್ಚದ ಪ್ರಗತಿಯ ಮೇಲುಸ್ತುವಾರಿಯನ್ನು ಮಾಡುತ್ತದೆ. ಎಂಪಿಐಸಿ ಬಳಸಿಕೊಂಡು ಯೋಜನಾ ಇಲಾಖೆಯು ಪ್ರತಿ ತಿಂಗಳು ಯೋಜನೆಗಳ ಅನುಷ್ಠಾನವನ್ನು ಮೇಲುಸ್ತುವಾರಿ ಮಾಡುತ್ತದೆ. ಮಹಿಳಾ ಉದ್ದೇಶಿತ ಯೋಜನೆಗಳ ಮೇಲುಸ್ತುವಾರಿ ಮಾಡಲು ಉನ್ನತೀಕರಿಸಿದ ಎಂಪಿಐಸಿ ನಮೂನೆಯನ್ನು ಬಳಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಹಿಳಾ ಉದ್ದೇಶಿತ ಆಯವ್ಯಯದಲ್ಲಿನ ಯೋಜನೆಗಳನ್ನು ಮೇಲುಸ್ತುವಾರಿ ಮಾಡುವ ಪ್ರಮುಖ ಅಧ್ಯಾದೇಶವನ್ನು ಹೊಂದಿರುತ್ತದೆ. ಈ ಇಲಾಖೆಯು ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ, ಯೋಜನೆಗಳ ಮೇಲುಸ್ತುವಾರಿ ಮಾಡಲು ಒಂದು ಉತ್ತಮವಾದ ಪರಿಯೋಜನೆಯನ್ನು ಹೊಂದಿರುತ್ತದೆ. ಕೆಎಂಎವೈನ ಅಡಿಯಲ್ಲಿ ತ್ರೈಮಾಸಿಕ ಮೇಲುಸ್ತುವಾರಿ ಹಾಗೂ ಪರಿಶೀಲನೆಯು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು, ಕೆಎಂಎವೈನ ಯೋಜನೆಗಳ ಮೇಲುಸ್ತುವಾರಿ ಮಾಡುವುದರೊಂದಿಗೆ ಮಹಿಳಾ ಉದ್ದೇಶಿತ ಆಯವ್ಯಯದ ಯೋಜನೆಗಳನ್ನು ಸಹ ಮೇಲುಸ್ತುವಾರಿ ಮಾಡುತ್ತದೆ.
ಮೌಲ್ಯಮಾಪನ
ಮಹಿಳಾ ಉದ್ದೇಶಿತ ಆಯವ್ಯಯದ ಯೋಜನೆಗಳ ಪರಿಣಾಮಗಳ ಮೌಲ್ಯಮಾಪನವನ್ನು ಯೋಜನಾ ಇಲಾಖೆಯು ಸ್ಥಾಪಿಸಿರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವತಿಯಿಂದ ಕೈಗೊಳ್ಳುವ ಪ್ರಸ್ತಾಪವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಾಡಿರುತ್ತದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಒಂದು ಸ್ವತಂತ್ರ ಪ್ರಾಧಿಕಾರವಾಗಿದ್ದು ಮೌಲ್ಯಮಾಪನ ಅಧ್ಯಯನಗಳನ್ನು ಕೈಗೊಳ್ಳುವ ಅಧ್ಯಾದೇಶವನ್ನು ಹೊಂದಿರುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು, ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಛೇಂಜ್ (ಐಎಸ್ಇಸಿ) ಮತ್ತು ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸ್ಟಡೀಸ್ ಇವರಿಗೆ ‘Monograph on the Status of Women in Karnataka’ ಎಂಬ ವರದಿಯನ್ನು ತಯಾರಿಸಲು ನಿಯುಕ್ತಿಗೊಳಿಸಿದೆ.
6. ಜೆಂಡರ್ ಬಜೆಟ್ ಲೆಕ್ಕಪರಿಶೋಧನೆ ಮತ್ತು ಸಾರ್ವಜನಿಕ ಲೆಕ್ಕಪರಿಶೋಧನಾ ಸಮಿತಿಯ ಶಿಫಾರಸ್ಸುಗಳು
ಮಹಿಳಾ ಉದ್ದೇಶಿತ ಆಯವ್ಯಯವು ಒಂದು ಪಂಚವಾರ್ಷಿಕ ಯೋಜನಾ ಅವಧಿಯನ್ನು ಪೂರ್ಣಗೊಳಿಸಿದೆ. ನಿಯಂತ್ರಕರು ಮತ್ತು ಮಹಾಲೇಖಪಾಲರು ಮಾರ್ಚ್ 2010 ರ ವರ್ಷಾಂತ್ಯದಲ್ಲಿ ಸಲ್ಲಿಸಿರುವ ರಾಜ್ಯ ಹಣಕಾಸು ವರದಿಯಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಕುರಿತು ಒಂದು ಕಂಡಿಕೆ ಇರುತ್ತದೆ. ಈ ವರದಿಯಲ್ಲಿ, ಜೆಂಡರ್ ಬಜೆಟ್ ಕೋಶವು, ವರ್ಗ-ಎ ಹಾಗೂ ವರ್ಗ-ಬಿನ ಯೋಜನೆಗಳಿಗೆ ಅಗತ್ಯವಿರುವ ಆಯವ್ಯಯದ ಪ್ರಮಾಣವನ್ನು ಮತ್ತು ಹಂಚಿಕೆ ಮಾಡಿರುವ ನಿಧಿಗಳ ಪ್ರಮಾಣವನ್ನು ನಿರ್ಧರಿಸುವಲ್ಲಿ ಭಾಗಿಯಾಗುವ ಅಗತ್ಯಕ್ಕೆ ಒತ್ತು ನೀಡಲಾಗಿದೆ. ಅದಲ್ಲದೆ, ಸೂಕ್ತ ಮೇಲುಸ್ತುವಾರಿಯ ಅಗತ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ, ಯೋಜನೆಗಳ ಪರಿಣಾಮ ಮತ್ತು ಮೌಲ್ಯಮಾಪನ ಅಧ್ಯಯನಗಳ ಕೈಗೊಳ್ಳುವಿಕೆಗೆ ಸಹ ಒತ್ತು ನೀಡಲಾಗಿದೆ. ಇದಲ್ಲದೆ, ಯೋಜನೆಗಳ ವರ್ಗೀಕರಣಕ್ಕೆ ಬಳಸಿರುವ ಊಹೆಗಳು ವಾಸ್ತವಕ್ಕೆ ದೂರವಿದ್ದು ಅಂತಹ ವರ್ಗೀಕರಣಕ್ಕೆ ಯಾವುದೇ ಮಾರ್ಗಸೂಚಿಗಳು ಇಲ್ಲದಿರುವುದು ವೀಕ್ಷಣೆಯ ವೇಳೆ ಗಮನಕ್ಕೆ ಬಂದಿದೆ.
ನಿಯಂತ್ರಕರು ಮತ್ತು ಮಹಾಲೇಖಪಾಲರು ಮಾರ್ಚ್ 2012ರ ವರ್ಷಾಂತ್ಯಕ್ಕೆ ನೀಡಿರುವ ರಾಜ್ಯ ಹಣಕಾಸಿನ ವರದಿಯಲ್ಲಿ, ಮಹಿಳಾ ಉದ್ದೇಶಿತ ಆಯವ್ಯಯದಡಿಯಲ್ಲಿನ ಎರಡು ಇಲಾಖೆಗಳಾದ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳನ್ನು ಮಾದರಿಯಾಗಿ ತೆಗೆದುಕೊಂಡು ಕೆಲವು ವಿಮರ್ಶಾತ್ಮಕ ವೀಕ್ಷಣೆಗಳನ್ನು ದಾಖಲಿಸಲಾಗಿದೆ. ಈ ವರದಿಯನ್ನು, ಫೆಬ್ರವರಿ 2013ರ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗಿದೆ.
ಸದರಿ ವರದಿಯಲ್ಲಿ ಜೆಂಡರ್ ಬಜೆಟ್ ಕೋಶದ ಕಾರ್ಯನಿರ್ವಹಣೆಯ ಕುರಿತ ವೀಕ್ಷಣೆಗಳನ್ನು ಹಾಗೆಯೇ ಮುಂದುವರೆಸಲಾಗಿದೆ. ಅರಣ್ಯ ಇಲಾಖೆಯ ಕುರಿತ ವೀಕ್ಷಣೆಗಳು; ಕೆಲವು ಯೋಜನೆಗಳನ್ನು ಮಹಿಳಾ ಉದ್ದೇಶಿತ ಆಯವ್ಯಯದ ವರ್ಗ-ಬಿನಲ್ಲಿ ವರ್ಗೀಕರಿಸಿದ್ದರೂ ಸಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿನಿಯೋಗ ಲೆಕ್ಕಗಳನ್ವಯ ಈ ಯೋಜನೆಗಳಲ್ಲಿ ಭರಿಸಿರುವ ವೆಚ್ಚಗಳು ವರ್ಗ-ಬಿನ ಮೂಲ ಉದ್ದೇಶಕ್ಕೆ, ಅಂದರೆ ‘ಕನಿಷ್ಠ ಶೇಕಡಾ 30 ರಷ್ಟಾದರೂ ಸೌಕರ್ಯಗಳನ್ನು ಮಹಿಳೆಯರಿಗಾಗಿ ಒದಗಿಸಬೇಕು ಎಂಬುದಕ್ಕೆ’ ಸರಿ ಹೊಂದುವುದಿಲ್ಲ. ವಿನಿಯೋಗ ಲೆಕ್ಕಗಳಲ್ಲಿ ವರದಿ ಮಾಡಿರುವಂತೆ ಈ ಯೋಜನೆಗಳಲ್ಲಿ ಭರಿಸಿರುವ ವೆಚ್ಚಗಳು ಶೇಕಡ 14 ರಿಂದ 20 ಮಾತ್ರ ಆಗಿದ್ದು ಊಹೆಗಳ ನಿಲುವನ್ನೆ ಇದು ಪ್ರಶ್ನಿಸುವಂತಿದೆ. ಪ್ರವಾಸೋದ್ಯಮ ಇಲಾಖೆಯ ಕುರಿತ ವೀಕ್ಷಣೆಗಳು ಮತ್ತು ಸದರಿ ಇಲಾಖೆಯು ಈ ಕುರಿತು ನೀಡಿರುವ ಸಮಜಾಯಿಷಿಯನ್ನು ಪರಿಗಣಿಸಿದ್ದಲ್ಲಿ, ಯೋಜನೆಗಳ ಅಂದಾಜುಗಳನ್ನು ಸಿದ್ಧಪಡಿಸುವಲ್ಲಿ ಸಂಯೋಜನೆ ಇಲ್ಲದಿರುವುದು ತಿಳಿದುಬರುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕುರಿತ ವೀಕ್ಷಣೆಗಳು, ಮಹಿಳಾ ಉದ್ದೇಶಿತ ಆಯವ್ಯಯದ ವರ್ಗ-ಬಿನ ಯೋಜನೆಗಳ ಮೇಲುಸ್ತುವಾರಿಯು ಅಪೂರ್ಣವಾಗಿವೆ ಎಂದು ಬಿಂಬಿಸುತ್ತದೆ.